ಗೋಪಾಲಸ್ವಾಮಿ, ಎಂ ವಿ  - 1896 - 1957. ಪ್ರಸಿದ್ಧ ಭಾರತೀಯ ಮನಶ್ಯಾಸ್ತ್ರಜ್ಞ ಮತ್ತು ಶಿಕ್ಷಣತಜ್ಞ. ಅಂದಿನ ಮದ್ರಾಸು ರಾಜ್ಯದಲ್ಲಿ 1896ನೆಯ ಡಿಸೆಂಬರ್ 31ರಂದು ಶ್ರೀಮಂತ ಮನೆತನದಲ್ಲಿ ಜನಿಸಿದರು. ತಂದೆ ಒಬ್ಬ ನ್ಯಾಯಾಧಿಕಾರಿ. ಸಣ್ಣ ಹುಡುಗರಾಗಿದ್ದಾಗಿನಿಂದಲೂ ಗೋಪಾಲಸ್ವಾಮಿಯವರಿಗೆ ವ್ಯಾಸಂಗದಲ್ಲಿ ಹೇಗೋ ಹಾಗೆ ವ್ಯಾಯಾಮದಲ್ಲೂ ಕ್ರಿಕೆಟ್ ಮತ್ತು ಟೆನಿಸ್ ಆಟಗಳಲ್ಲೂ ಬಹಳ ಆಸಕ್ತಿ ಇತ್ತು. ಇವರ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತೀರಿ ಹೋದದ್ದರಿಂದ ಇವರ ಪೋಷಣೆ, ಪಾಲನೆಗಳ ಹೊಣೆಯೆಲ್ಲ ತಾಯಿಯ ಮೇಲೇ ಬಿತ್ತು. ಹೈಸ್ಕೂಲು ವಿದ್ಯಾಭ್ಯಾಸದ ಅನಂತರ ಗೋಪಾಲಸ್ವಾಮಿಯವರು ಮದ್ರಾಸ್ ನಗರದ ಪಚ್ಚಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅನಂತರ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಬಿ.ಎ ಪದವಿ ಪಡೆದರು. ಆಮೇಲೆ ಇಂಗ್ಲೆಂಡಿಗೆ ಹೋಗಿ ಲಂಡನ್ ವಿಶ್ವವಿದ್ಯಾಲಯಲ್ಲಿ ಓದಿ ಬಿ.ಎಸ್‍ಸಿ. ಪದವಿ ಗಳಿಸಿದರು. ಮನಶ್ಯಾಸ್ತ್ರದಲ್ಲಿ ಹೆಚ್ಚು ಅಭಿರುಚಿಯುಂಟಾದ ಕಾರಣ ಅದೇ ವಿಶ್ವವಿದ್ಯಾಲಯದಲ್ಲಿ ಆ ವಿಷಯದ ಮೇಲೆ ತಮ್ಮ ವ್ಯಾಸಂಗವನ್ನು ಮುಂದುವರಿಸಿ ಅಲ್ಲಿನ ಮನಶ್ಯಾಸ್ತ್ರ ಪ್ರಾಧ್ಯಾಪಕರಾಗಿದ್ದ ಸಿ. ಸ್ಪಿಯರ್‍ಮನ್ ಎಂಬುವರ ನಿರ್ದೇಶನದಲ್ಲಿ ಆ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು.

ಭಾರತಕ್ಕೆ ಹಿಂತಿರುಗಿದ ಮೇಲೆ ಗೋಪಾಲಸ್ವಾಮಿಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಮನಶ್ಯಾಸ್ತ್ರ ವಿಭಾಗದ ಮುಖ್ಯಸ್ಥರಾಗಿ (1924) 20 ವರ್ಷ ಸೇವೆ ಸಲ್ಲಿಸಿ ಮುಂದೆ ಮೈಸೂರಿನ ಮಹಾರಾಜ ಕಾಲೇಜಿನ ಪ್ರಧಾನ ಆಡಳಿತಗಾರರಾದರು. ಇವರ ಆಸಕ್ತಿ ಮತ್ತು ಶ್ರದ್ಧೆಯ ಪರಿಣಾಮವಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಮನಶ್ಯಾಸ್ತ್ರ ಶಾಖೆ ಸ್ಥಾಪಿತವಾಯಿತು.

ತತ್ತ್ವಶಾಸ್ತ್ರ ಒಂದು ಭಾಗವಾಗಿದ್ದ ಮನಶ್ಯಾಸ್ತ್ರಕ್ಕೆ ಒಂದು ಪ್ರತ್ಯೇಕ ಸ್ಥಾನಮಾನವನ್ನು ದೊರಕಿಸಿಕೊಡಲು ಮತ್ತು ಮನಶ್ಯಾಸ್ತ್ರಕ್ಕೆ ವೈಜ್ಞಾನಿಕ ವಿಧಾನಗಳನ್ನು ಅನ್ವಯಿಸಲು ಗೋಪಾಲಸ್ವಾಮಿಯವರು ಬಹಳ ಶ್ರಮಿಸಿದರು. ಇದಲ್ಲದೆ ಭಾರತದ ಪ್ರಾಚೀನ ಮನಶ್ಯಾಸ್ತ್ರದ ಮೂಲತತ್ತ್ವಗಳ ಸಿಂಧುತ್ವವನ್ನು ಆಧುನಿಕ ಪ್ರಯೋಗ ಪರೀಕ್ಷಾ ಪದ್ಧತಿಗಳಿಂದ ಸ್ಥಿರೀಕರಿಸಿ ಆ ವಿಭಾಗದಲ್ಲೂ ಸಂಶೋಧನೆ ನಡೆಸಿದರು. ಪ್ರಾಣಿಗಳ ವರ್ತನೆ, ಅಪರಾಧ ಸಂಶೋಧನೆ, ಅತೀಂದ್ರಿಯ ಪ್ರತ್ಯಕ್ಷ, ಕಲಿಕೆಯ ರೀತಿಗಳು, ಅವಳಿಜವಳಿ ಮಕ್ಕಳ ಬುದ್ಧಿಶಕ್ತಿ, ಉಪಲಬ್ಧ, ಗುಣಾರ್ಜನೆ, ಬಾಲಾಪರಾಧ, ಅನೃತಶೋಧನೆ, ದರ್ಪಣ ಲೇಖನ, ಭಾವನಾರಚನೆ, ಕಾರ್ಯ ವಿಶ್ಲೇಷಣ, ಉತ್ಕಾಂಕ್ಷೆಯ ಮಟ್ಟ, ಕೈಚಳಕ, ಸಹಜ ಸಾಮಥ್ರ್ಯ ಪರೀಕ್ಷೆ. ಪ್ರತಿಕ್ರಿಯೆಯ ವೇಗ-ಮೊದಲಾದ ವಿಷಯಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಹಲವಾರು ಸಂಶೋಧನೆಗಳಿಗೆ ಯುಕ್ತ ಸಲಹೆ ನೀಡಿದರು. ಅಲ್ಲದೆ ಇಂಥ ಸಂಶೋಧನೆಗಳಿಗೆ ಬೇಕಾಗಬಹುದಾದ ಅನೇಕ ಉಪಕರಣಗಳನ್ನೂ ತಾವೇ ಸಿದ್ಧ ಪಡಿಸಿಕೊಂಡರೆಂಬ ವಿಷಯ ಗಮನಾರ್ಹವಾದುದು. ಇವರ ಸಂಶೋಧನ ಬರೆಹಗಳು ಇಂಗ್ಲೆಂಡಿನ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಅಲ್ಲದೆ ಗೋಪಾಲಸ್ವಾಮಿಯವರು ಆಲ್ ಇಂಡಿಯಾ ಸೈನ್ಸ್ ಕಾಂಗ್ರೆಸಿನ ಅನೇಕ ವಾರ್ಷಿಕ ಕೂಟಗಳಲ್ಲಿ ಭಾಗವಹಿಸಿ ತಮ್ಮ ಸಂಶೋಧನೆಗಳ ಬಗ್ಗೆ ವಿಚಾರಗಳನ್ನು ಮಂಡಿಸಿದರು.

ಮನಶ್ಯಾಸ್ತ್ರದಲ್ಲಿ ಹೇಗೋ ಹಾಗೆ ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯಗಳಲ್ಲೂ ಅಪಾರ ಆಸಕ್ತಿಯಿತ್ತಾಗಿ ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ಮೊದಲಬಾರಿಗೆ ಆದರ್ಶ ಶಿಶುವಿಹಾರವೊಂದು ಸ್ಥಾಪಿತವಾಗಲು ಸಹಕರಿಸಿದರು. 1952ನೆಯ ಇಸವಿಯಲ್ಲಿ ಪ್ಯಾರಿಸ್ ನಗರದಲ್ಲಿ ನಡೆದ ಒಂದು ವಿಶ್ವಸಮ್ಮೇಳನದಲ್ಲಿ ಭಾಗವಹಿಸಿ ತಾವು ನಡೆಸಿದ ಶಿಶುಶಿಕ್ಷಣ ವಿಷಯದಲ್ಲಿನ ಪ್ರಯೋಗ ಪದ್ಧತಿಗಳನ್ನು ಕುರಿತು ಮಾತನಾಡಿ ಮೆಚ್ಚುಗೆ ಸಂಪಾದಿಸಿದರು.

ಗೋಪಾಲಸ್ವಾಮಿಯವರ ಸಲಹೆಗಳಿಂದಾಗಿ ರಾಜ್ಯದ ಪರೀಕ್ಷಾ ಪದ್ಧತಿಯಲ್ಲಿ ಹಲವಾರು ಮಾರ್ಪಾಟುಗಳಾದವು.
ಭಾರತದಲ್ಲಿ ಮೊಟ್ಟಮೊದಲಿಗೆ ಬಾನುಲಿ ಕೇಂದ್ರವೋಂದನ್ನು ಸ್ವಂತ ಖರ್ಚಿನಿಂದ ಸ್ಥಾಪಿಸಿದ (1935) ಕೀರ್ತಿ ಗೋಪಾಲಸ್ವಾಮಿಯವರದು. ಈ ಸಂಸ್ಥೆಯಿಂದ ಮೈಸೂರು ನಗರದ ಕೀರ್ತಿ ಹೆಚ್ಚಿತು. ಇಂದು ಪ್ರಚಲಿತವಾಗಿರುವ ಆಕಾಶವಾಣಿ ಎಂಬ ಹೆಸರನ್ನು ಕೊಟ್ಟವರೂ ಇವರೇ. ನಾಡಿನಲ್ಲಿ ವಿದ್ಯೆ, ಸಂಸ್ಕøತಿ, ಕಲೆ, ಜ್ಞಾನ, ಪ್ರಸಾರವಾಗಬೇಕೆಂಬ ಇವರ ಹಿರಿಯಾಸೆ ಆಕಾಶವಾಣಿಯಿಂದ ನೆರವೇರಿತು.

ಮೈಸೂರು ಮಹಾರಾಜ ಕಾಲೇಜಿನ ಮುಖ್ಯಸ್ಥ ಹುದ್ದೆಯಿಂದ ವಿಶ್ರಾಂತರಾದ ಮೇಲೆ (1952) ಮೈಸೂರು ಸರ್ಕಾರ ಇವರನ್ನು ಬೆಂಗಳೂರಿನ ಮೆಂಟಲ್ ಆಸ್ಪತ್ರೆಯಲ್ಲಿ 1938 ರಲ್ಲಿ ಸ್ಥಾಪಿತವಾಗಿದ್ದ ಮನೋರೋಗ ಚಿಕಿತ್ಸಾ ಮನಶ್ಯಾಸ್ತ್ರ ಶಾಖೆಯೊಂದಿಗೆ ಒಂದು ಸಂಶೋಧನಾ ಶಾಖೆಯನ್ನೂ ಏರ್ಪಡಿಸಲು ಆಹ್ವಾನಿಸಿ ಆ ಶಾಖೆಯ ಮೊದಲ ನಿರ್ದೇಶಕರನ್ನಾಗಿ ನೇಮಿಸಿತು. ಈಗಿನ ಆಲ್ ಇಂಡಿಯ ಇನ್‍ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಎಂಬ ಸಂಸ್ಥೆಗೆ ಗೋಪಾಲಸ್ವಾಮಿಯವರು ಸ್ಥಾಪಿಸಿದ ಶಾಖೆ ಅಡಿಗಲ್ಲಾಯಿತು. ಮನಶ್ಯಾಸ್ತ್ರದ ವ್ಯಾಸಂಗ ವಿಶ್ಲೇಷಣೆಗಳು ಮಾನವನ ಮಾನಸಿಕ ಆರೋಗ್ಯಕ್ಕೆ, ಪ್ರಗತಿಗೆ ಸಾಧಕವಾಗಬೇಕು ಎಂಬ ಹಿರಿಯ ಉದ್ದೇಶವನ್ನು ಗೋಪಾಲಸ್ವಾಮಿಯವರು ತಮ್ಮ ಜೀವನದುದ್ದಕ್ಕೂ ಸಾಧಿಸಲು ಹೆಣಗಿದರು. ಈ ಸಾಧನೆ ಇವರಿಗೆ ಅಂತರ ರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟಿತು.											(ಸಿ.ಕೆ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ